ಫೇರ್‍ಬ್ಯಾಂಕ್ಸ್, ಡಗ್ಲಾಸ್
	1833-1939, ಹಾಲಿವುಡ್ ನಟ, ನಿರ್ಮಾಪಕ. ಹೊಡೆದಾಟದ, ವೀರಾಟೋಪದ ಸಿನಿಮಾನಾಯಕರಲ್ಲಿ ಮೊದಲಿಗ ಹಾಗೂ ಪ್ರಮುಖ. ಧೀರ ಅಭಿನಯ, ಸೊಗಸುಗಾರಿಕೆ, ರಂಜಕತೆ, ಸದಾ ಹಸನ್ಮುಖದ ಸಹಜತೆಗಳಿಂದ ಪ್ರಸಿದ್ಧನಾಗಿ 20ರ ದಶಕದಲ್ಲಿ ಹಾಲಿವುಡ್ಡಿನ ಚಕ್ರವರ್ತಿ ಎಂದು ಹೆಸರು ಗಳಿಸಿದ. ಕಾಲರಾಡೊ ಪ್ರಾಂತ್ಯದ ಡೆನ್ವರ್‍ನಲ್ಲಿ 1883ರ ಮೇ 23ರಂದು ಜನಿಸಿದ. ಇವನ ನಿಜವಾದ ಹೆಸರು ಡಗ್ಲಾಸ್ ಎಲ್ಟನ್ ಉಲ್‍ಮನ್. ಕಾಲೇಜು ವಿದ್ಯಾಭ್ಯಾಸಾನಂತರ ನಾಟಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ. 1900ರಲ್ಲಿ ಅಕಾಡೆಮಿ ಆಫ್ ಮ್ಯೂಸಿಕ್ ಸಂಸ್ಥೆಯ ಆಶ್ರಯದಲ್ಲಿ ಪ್ರಥಮ ಬಾರಿಗೆ ರಂಗ ಪ್ರವೇಶಮಾಡಿದ. ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದು 1902ರಲ್ಲಿ ರಂಗಕಾಶಿಯೆನಿಸಿದ ಬ್ರಾಡ್‍ವೇ ಸೇರಿದ. 1914ರ ವೇಳೆಗೆ ಜನಪ್ರಿಯ ಬ್ರಾಡ್‍ವೇ ನಟನಾದ. ಹಾಲಿವುಡ್ಡಿನ ಖ್ಯಾತ ನಿರ್ದೇಶಕ ಡಿ. ಡಬ್ಲೂ ಗ್ರಿಫಿತ್‍ನ ನಿರ್ದೇಶನದ ದಿ ಲ್ಯಾಂಬ್ (1915) ಚಿತ್ರದ ಮೂಲಕ ಮೊದಲಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡ. ಎರಡೇ ವರ್ಷಗಳಲ್ಲಿ ಸ್ವಂತ ಆರ್ಟ್‍ಕ್ರಾಪ್ಟ್ ಎಂಬ ಚಿತ್ರ ತಯಾರಿಕಾ ಸಂಸ್ಥೆಯನ್ನು ಕಟ್ಟಿದ. 1918ರಲ್ಲಿ ಇದಕ್ಕೆ ಡಗ್ಲಾಸ್ ಫೇರ್‍ಬ್ಯಾಂಕ್ಸ್ ಪಿಕ್ಚರ್ ಕಾರ್ಪೊರೇಷನ್ ಎಂದು ಪುನರ್ನಾಮಕರಣವಾಯಿತು. ಅನಂತರ ಎಲ್ಟನ್ ಕಾರ್ಪೊರೇಷನ್ ಎಂದಾಯಿತು. ಈತ ಎಲ್ಟನ್ ತಾಮಸ್ ಎಂಬ ಗುಪ್ತನಾಮದಲ್ಲಿ ಆಗಾಗ ಚಿತ್ರಕಥೆಗಳನ್ನೂ ಬರೆಯುತ್ತಿದ್ದ. ಇವನು ನಾಯಕನಟನಾಗಿದ್ದ ಅತ್ಯಂತ ಜನಪ್ರಿಯ ಚಿತ್ರಗಳೆಂದರೆ: ದಿ ಮಾರ್ಕ್ ಆಫ್ ಜೊರೊ (1920) ದಿ ತ್ರಿ ಮಸ್ಕೆಟೇರ್ಸ್ (1921), ರಾಬಿನ್‍ಹುಡ್ (1922), ದಿ ತೀಪ್ ಆಫ್ ಬಾಗ್ದಾದ್ (1924), ದಿ ಬ್ಲಾಕ್ ಪೈರೇಟ್ (1925), ದಿ ಐರನ್ ಮಾಸ್ಕ್ (1929), ದಿ ಟೇಮಿಂಗ್ ಆಫ್ ದಿ ಷ್ರೂ (1929), ಇವು.

	1919ರಲ್ಲಿ ಮೇರಿ ವಿಕ್‍ಫರ್ಡ್, ಚಾರ್ಲಿ ಚಾಪ್ಲಿನ್ ಮತ್ತು ಡಿ. ಡಬ್ಲ್ಯೂ ಗ್ರಿಫಿತ್‍ರ ಒಡಗೂಡಿ ಈತ ಯುನೈಟೆಡ್ ಆರ್ಟಿಸ್ಟ್ಸ್ ಎಂಬ ವಿತರಣ ಸಂಸ್ಥೆಯನ್ನು ಆರಂಭಿಸಿ, ಸ್ವತಂತ್ರವಾಗಿ ನಿರ್ಮಿತವಾದ ಚಿತ್ರಗಳ ಹಂಚಿಕೆಯನ್ನು ನಿರ್ವಹಿಸತೊಡಗಿದ. ಮೂರುಬಾರಿ ಮದುವೆಯಾದ. ಇವನ ಎರಡನೆ ಪತ್ನಿ ಖ್ಯಾತ ತಾರೆಯೂ ಟೇಮಿಂಗ್ ಆಫ್ ದಿ ಷ್ರೂ ಸಹನಟಿಯೂ ಆದ ಮೇರಿ ಪಿಕ್‍ಫರ್ಡ್ (1883-1979). 1920ರಿಂದ 1936ರವರೆಗಿನ ಇವರ ದಾಂಪತ್ಯ ವಿವಾಹ ವಿಚ್ಛೇದನದಲ್ಲಿ ಕೊನೆಗೊಂಡಿತು. ದಿ ಪ್ರೈವೇಟ್ ಲೈಫ್ ಆಫ್ ಡಾನ್ ಜುವಾನ್ (1954) ಇವನ ಕೊನೆಯ ಚಿತ್ರ. 1936ರಲ್ಲಿ ಅಭಿನಯದಿಂದ ನಿವೃತ್ತನಾಗುತ್ತೇನೆಂದು ಸಾರ್ವಜನಿಕವಾಗಿ ಘೋಷಿಸಿ ನಿಧನನಾಗುವವರೆಗೂ ನಿರ್ಮಾಪಕನಾಗಿ ಉಳಿದ. ಕ್ಯಾಲಿಫೋರ್ನಿಯದ ಸಾಂತಾ ಮೊನಿಕಾದಲ್ಲಿ 1939 ಡಿಸೆಂಬರ್ 12ರಂದು ನಿಧನನಾದ. ಚಲನಚಿತ್ರದ ಅಂತರರಾಷ್ಟ್ರೀಯ ಮುನ್ನಡೆಗೆ ಇವನು ಸಲ್ಲಿಸಿರುವ ವಿಶಿಷ್ಟ ಹಾಗೂ ಅಮೋಘ ಸೇವೆಗಾಗಿ 1939ರಲ್ಲಿ ಇವನಿಗೆ ಮರಣೋತ್ತರ ಆಸ್ಕರ್ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಯಿತು. ಈ ಅಕಾಡೆಮಿಯ ಮೊದಲ ಅಧ್ಯಕ್ಷನಾಗಿದ್ದವನು ಈತ. ದಿ ಫೋರ್ತ್ ಮಸ್ಕೆಟೇರ್ ಎಂಬ ಹೆಸರಿನಲ್ಲಿ ಇವನ ಜೀವನಚರಿತ್ರೆ 1953ರಲ್ಲಿ ಪ್ರಕಟವಾಯಿತು. ಇವನ ಪ್ರಥಮ ಪತ್ನಿ ಆನಾ ಜಿತ್ ಸಲ್ಲಿಯಲ್ಲಿ ಹುಟ್ಟಿದ ಮಗ ಜೂನಿಯರ್ ಡಗ್ಲಾಸ್ ಫೇರ್‍ಬ್ಯಾಂಕ್ 1909 ಕೂಡ ತಂದೆಯಂತೆಯೇ ಉಲ್ಲಾಸೀ ನಾಯಕನಟ.
	(ಎಸ್.ಎಸ್.ಎಂಯು)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ